ಅಲೆಮಾರಿಯ ಅನುಭವಗಳು
ನನ್ನ ಅನುಭವಗಳನ್ನು ಇಲ್ಲಿ ತಮ್ಮೊಂದಿಗೆ ಹಂಚಿಕೊಂಡಿರುವೆ. ಕನ್ನಡನಾಡನ್ನು ಸುತ್ತಾಡುವ ಬಲವಾದ ಹಂಬಲ ನನಗೆ. ಈ ಬ್ಲಾಗ್-ನ ಪ್ರೇರಣೆ ಮಿತ್ರ ವೇಣು ವಿನೋದ್-ರವರ ಬ್ಲಾಗ್-ನಿಂದ.
Thursday, November 12, 2009
Sunday, October 04, 2009
ಕರ್ನಾಟಕ ಪ್ರೀಮಿಯರ್ ಲೀಗ್
ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಏನೇ ಹೇಳಲಿ. ರಾಹುಲ್ ದ್ರಾವಿಡ್ ದೂರಾನೇ ಉಳಿಯಲಿ. ಬೃಜೇಶ್ ಪಟೇಲ್ ಮತ್ತು ಒಡೆಯರ್ ಎಷ್ಟೇ ಕಚ್ಚಾಡಿಕೊಳ್ಳಲಿ. ಕರ್ನಾಟಕ ಪ್ರಿಮಿಯರ್ ಲೀಗ್ ಪ್ರಥಮ ಆವೃತ್ತಿ ಯಶಸ್ಸನ್ನು ಗಳಿಸಿದ್ದಂತು ಹೌದು. ಬರೀ ಬೆಂಗಳೂರು, ಮೈಸೂರು ಮತ್ತು ಧಾರವಾಡ ಲೀಗ್ ಗಳಲ್ಲಿ ಆಡುತ್ತಾ ಇದ್ದ ಹಲವಾರು ಪ್ರತಿಭಾವಂತ ಆಟಗಾರರ ಪರಿಚಯವಂತೂ ರಾಜ್ಯದ ಕ್ರಿಕೆಟ್ ಪ್ರೇಮಿಗಳಿಗೆ ಆಯಿತು. ದೇಶದಲ್ಲೇ ರಾಜ್ಯ ಮಟ್ಟದಲ್ಲಿ ಇಂತಹ ಪ್ರಯೋಗ ಮಾಡಿ ರಿಸ್ಕ್ ತೆಗೆದುಕೊಂಡು ಯಶಸ್ವಿ ಆಗಿದ್ದಕ್ಕೆ ಕೆ.ಎಸ್.ಸಿ.ಎಗೆ ಅಭಿನಂದನೆಗಳು. ಉಳಿದ ರಾಜ್ಯಗಳ ಕ್ರಿಕೆಟ್ ಮಂಡಳಿಗಳು ಕೆಪಿಎಲ್-ನ್ನು ಕುತೂಹಲದಿಂದ ಗಮನಿಸುತ್ತಿದ್ದರು. ಈಗ ಪ್ರತಿ ರಾಜ್ಯದಲ್ಲೂ ಇದೇ ತರಹದ ಲೀಗ್-ಗಳು ಹುಟ್ಟಿಕೊಂಡರೆ ಆಶ್ಚರ್ಯವಿಲ್ಲ.
ಕ್ಷೇತ್ರರಕ್ಷಣೆ ವಿಭಾಗ ಬಿಟ್ಟರೆ ಬೌಲಿಂಗ್ ಮತ್ತು ಬ್ಯಾಟಿಂಗ್ ಉನ್ನತ ಮಟ್ಟದ್ದಾಗಿತ್ತು. ಲೀಗ್ ಆಟಗಾರರು ಎಂದು ಎಷ್ಟೋ ಜನರು (ಪ್ರಮುಖ ಕ್ರಿಕೆಟಿಗರು ಮತ್ತು ಜರ್ನಲಿಸ್ಟುಗಳು) ಈ ಕೂಟದ ಯಶಸ್ಸಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ನನಗಂತೂ ಇದೊಂತರ ಹಬ್ಬ ಇದ್ದಂಗಾಯಿತು. ಎಷ್ಟೋ ಪ್ರತಿಭಾವಂತ ಲೀಗ್ ಆಟಗಾರರ ಹೆಸರು ಮಾತ್ರ ಕೇಳಿದ್ದೆ. ಈಗ ಅವರ ಆಟವನ್ನೂ ನೋಡಿದಂತಾಯಿತು. ರಾಜ್ಯವನ್ನು ಪ್ರತಿನಿಧಿಸಿದ್ದ ಆಟಗಾರರ ಆಟದ ಶೈಲಿಯನ್ನೂ ನೋಡಿದಂತಾಯಿತು.
ಬೆಂಗಳೂರಿನಲ್ಲಿ ನಡೆದ ಪಂದ್ಯಗಳಿಗೆ (ಒಂದೆರಡು ದಿನಗಳನ್ನು ಹೊರತುಪಡಿಸಿ) ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಆದರೆ ರಣಜಿ ಪಂದ್ಯ ನೋಡುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂಬುದು ಗಮನಾರ್ಹ. ಮೈಸೂರಿನಲ್ಲಿ ನಡೆದ ಎಲ್ಲಾ ೬ ಪಂದ್ಯಗಳೂ ಹೌಸ್ ಫುಲ್. ಮುಂದಿನ ವರ್ಷಗಳಲ್ಲಿ ಕೆ.ಎಸ್.ಸಿ.ಎ ಪಂದ್ಯಗಳನ್ನು ರಾಜ್ಯದ ಉಳಿದ ಭಾಗಗಳಲ್ಲೂ ನಡೆಸಬೇಕು. ಆಗ ಜನರಲ್ಲಿ ಆಸಕ್ತಿ ಹೆಚ್ಚಿ ಕೆಪಿಎಲ್ ಇನ್ನಷ್ಟು ಯಶಸ್ಸನ್ನು ಗಳಿಸಬಹುದು. ಫ್ರಾಂಚೈಸಿಗಳಿಂದ ಮತ್ತು ಪ್ರಾಯೋಜಕರಿಂದ ಹರಿದು ಬಂದ ಹಣವನ್ನು ರಾಜ್ಯದೆಲ್ಲೆಡೆ ಕ್ರೀಡಾಂಗಣಗಳನ್ನು ನಿರ್ಮಿಸಲು ವ್ಯಯಿಸಿ ಕೆಪಿಎಲ್ ಪಂದ್ಯಗಳನ್ನು ಆಯಾ ತಂಡಗಳ ಹೋಮ್ ಬೇಸ್-ನಲ್ಲಿ ಆಡಿಸಿದರೆ ಯಶಸ್ಸು ಖಚಿತ. ಬರೀ ಬೆಂಗಳೂರು-ಮೈಸೂರಿನಲ್ಲಿ ಪಂದ್ಯಗಳನ್ನು ಆಡಿಸಿದರೆ ಆಸಕ್ತಿ ಕ್ರಮೇಣ ಕಡಿಮೆ ಆಗುವುದರಲ್ಲಿ ಸಂಶಯವಿಲ್ಲ.
ನಿರೀಕ್ಷಿಸಿದಂತೆ ನಡೆದದ್ದು:
೧. ಪ್ರಾವಿಡೆಂಟ್ ಬೆಂಗಳೂರು ಪ್ರಶಸ್ತಿ ಗೆದ್ದಿದ್ದು
೨. ಅರುಣ್ ಕುಮಾರ್ ಭರ್ಜರಿ ಬ್ಯಾಟಿಂಗ್
೩. ರಾಬಿನ್ ಉತ್ತಪ್ಪ ಭರ್ಜರಿ ವೈಫಲ್ಯ
೪. ಸ್ಟೀವ್ ಲಾಝರಸ್ ಮತ್ತು ಸುನಿಲ್ ಕುಮಾರ್ ಜೈನ್ ಪ್ರತಿಭಾ ಪ್ರದರ್ಶನ
೫. ಆನಂದ್ ಕಟ್ಟಿ ಉತ್ತಮ ಬೌಲಿಂಗ್
ನಿರೀಕ್ಷಿಸಿರಲಿಲ್ಲ:
೧. ಭರತ್ ಚಿಪ್ಲಿ, ದೇವರಾಜ್ ಪಾಟೀಲ್ ಮತ್ತು ಎಸ್.ಎಲ್.ಅಕ್ಷಯ್ ವೈಫಲ್ಯ
೨. ಬೆಳಗಾವಿ ಫೈನಲ್ ತಲುಪಿದ್ದು
೩. ಸುಧೀಂದ್ರ ಶಿಂದೆಗೆ ಬಿಜಾಪುರ ಬುಲ್ಸ್ ನಾಯಕತ್ವ
೪. ಮಿಥುನ್ ಬೀರಾಲ ಯಶಸ್ಸು
೫. ಮಧುಸೂದನ್, ರಾಮಲಿಂಗ ಪಾಟೀಲ್, ವೆಂಕಟೇಶ್ ಮತ್ತು ಸರ್ಫರಾಝ್ ಅಶ್ರಫ್ ಉತ್ತಮ ಬೌಲಿಂಗ್ ಪ್ರದರ್ಶನ
ಬೆಟ್ ಕಟ್ಟಿ ಗೆದ್ದದ್ದು:
ಮಂಗಳೂರು ಯುನೈಟೆಡ್, ದಾವಣಗೆರೆ ಡೈಮಂಡ್ಸ್ ಮತ್ತು ಮಲ್ನಾಡ್ ತಂಡಗಳು ಕೊನೆಯ ೩ ಸ್ಥಾನ ಗಳಿಸುತ್ತವೆ ಎಂದು
ನಾನು ಇಂಗು ತಿಂದ ಮಂಗನಾದ್ದು:
ಡೇವಿಡ್ ಜಾನ್ಸನ್ ಮತ್ತು ಮನ್ಸೂರ್ ಅಲಿ ಖಾನ್ ಇವರಿಬ್ಬರ ಹೆಸರನ್ನು ಆಟಗಾರರ ಲಿಸ್ಟಿನಲ್ಲಿ ಕಂಡಾಗ ಕೆಟ್ಟದಾಗಿ ನಕ್ಕು ಬಿಟ್ಟಿದ್ದೆ. ಜಾನ್ಸನ್ ಅದಾಗಲೇ ನಿವೃತ್ತಿ ಘೋಷಿಸಿಯಾಗಿತ್ತು ಮತ್ತು ಮನ್ಸೂರ್ ಎಂಟು ವರ್ಷಗಳ ಹಿಂದೆನೇ ರಾಜ್ಯ ತಂಡದಿಂದ ಹೊರಬಿದ್ದು ಪ್ರಸಕ್ತ ಬೆಂಗಳೂರು ಲೀಗಿನಲ್ಲಿ ಕೆನರಾ ಬ್ಯಾಂಕ್ ಪರವಾಗಿ ಆಡುತ್ತಾ ಮತ್ತು ಕೋಚಿಂಗ್ ಮಾಡುತ್ತಾ ಇದ್ದರು. ಇವರನ್ನು ಆಡಿಸಿದ ತಂಡಗಳು ಉದ್ಧಾರ ಆದ ಹಾಗೆ ಎಂದು ತಿಳಿದಿದ್ದೆ. ಆದರೆ ಅವರಿಬ್ಬರೂ ಪ್ರೂವ್ಡ್ ಮಿ ರಾಂಗ್. ಜಾನ್ಸನ್ ಅದ್ಭುತ ಬೌಲಿಂಗ್ ಮಾಡಿ ತನ್ನ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತೆಯೇ ಮನ್ಸೂರ್ ಕೂಡಾ ತೆನ್ನೆಲ್ಲಾ ಅನುಭವವನ್ನು ಬಳಸಿ ಉತ್ತಮ ಬೌಲಿಂಗ್ ಮಾಡಿದರು. ಇವರ ’ಸ್ಲೋ ಬಾಲ್’ ದಾಂಡಿಗರನ್ನು ಪೇಚಿಗೆ ಸಿಲುಕಿಸುವುದನ್ನು ನೋಡುವುದೇ ಒಂದು ಆನಂದ.
ಕೆಟ್ಟ ಜಾಹೀರಾತು:
ಶಾಮನೂರು ದಾವಣಗೆರೆ ಡೈಮಂಡ್ಸ್
ಅವಶ್ಯಕತೆಯಿರಲಿಲ್ಲ:
ಬ್ರಾಂಡ್ ಅಂಬಾಸಿಡರ್-ಗಳದ್ದು
ಅಚ್ಚರಿ ಮೂಡಿಸಿದ್ದು:
೧. ರಾಂಗ್ಸೆನ್ ಜೊನಾಥನ್ ಬ್ಯಾಟಿಂಗ್ (ಕೆಪಿಎಲ್ ಉತ್ತಮ ಪ್ರದರ್ಶನದಿಂದ ಕರ್ನಾಟಕ ೨೦-೨೦ ತಂಡಕ್ಕೆ ತದನಂತರ ಆಯ್ಕೆಯಾದರು)
೨. ನಿಖಿಲ್ ಹಲ್ದೀಪುರ್ ಕೆಪಿಎಲ್-ನಲ್ಲಿ ಆಡಿದ್ದು
೩. ಬಾಲಚಂದ್ರ ಅಖಿಲ್ ಮತ್ತು ದೀಪಕ್ ಚೌಗುಲೆ ಉತ್ತಮ ನಾಯಕತ್ವ
೪. ವಿನಯ್ ಕುಮಾರ್ ಬ್ಯಾಟಿಂಗಿನಲ್ಲಿ ಮಿಂಚಿದ್ದು
೫. ಸುಧೀರ್ ರಾವ್ ಮತ್ತು ಅನಿರುದ್ಧ ಜೋಶಿ ಉತ್ತಮ ಬ್ಯಾಟಿಂಗ್ ಪ್ರದರ್ಶನ.
ನಿರಾಸೆ ಮಾಡಿದ್ದು:
೧. ಶಾಮ್ ಪೊನ್ನಪ್ಪ ಮತ್ತು ಕೆ.ಎಸ್.ಟಿ.ಸಾಯಿ ಇನ್ನಷ್ಟು ರನ್ನು ಗಳಿಸಲಿಲ್ಲವೆಂದು
೨. ಮಂಗಳೂರು ಯುನೈಟೆಡ್ ಜನಾರ್ಧನ ತಿಂಗಳಾಯನನ್ನು ಒಂದೂ ಪಂದ್ಯದಲ್ಲೂ ಆಡಿಸದೇ ಇದ್ದದ್ದು.
೩. ಧಾರವಾಡ-ಹುಬ್ಬಳ್ಳಿ ಹೆಸರಿನಲ್ಲಿ ತಂಡ ಇರದೇ ಇದ್ದಿದ್ದು! ಇಲ್ಲಿರುವ ಅತ್ಯಂತ ಉತ್ತಮ ಆಟಗಾರರಿಗೆ ಅವಕಾಶ ಸಿಕ್ಕರೆ ಒಳ್ಳೆಯದಿತ್ತು. ದಾವಣಗೆರೆ ಡೈಮಂಡ್ಸ್ ತಾನು ಧಾರವಾಡದ ತಂಡ ಕೂಡಾ ಎನ್ನುತ್ತದಾದರೂ ಹಾಗನಿಸುವುದಿಲ್ಲ.
ಕೆಪಿಎಲ್-ನ ಕೆಟ್ಟ ಗಳಿಗೆ:
ಸುಧೀಂದ್ರ ಶಿಂದೆಯಿಂದ ಮಿಥುನ್ ಬೀರಾಲನಿಗೆ ಕಪಾಳ ಮೋಕ್ಷ
ದಶಮಾನದ ಕಮ್ ಬ್ಯಾಕ್:
ಮಿಥುನ್ ಬೀರಾಲ. ೨೦೦೧ರಲ್ಲಿ ರಾಜ್ಯಕ್ಕೆ ಕೊನೆಯ ಬಾರಿ ಆಡಿದ್ದ ಮಿಥುನ್, ಕೆಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ರಾಜ್ಯ ೨೦-೨೦ ತಂಡದಲ್ಲಿ ಸ್ಥಾನ ಪಡೆದರು. ಅಂತೂ ಕೊನೆಗೆ ಪ್ರಥಮ ಬಾರಿಗೆ ಉತ್ತಮ ಪ್ರದರ್ಶನದ ಆಧಾರದ ಮೇಲೆ ಕರ್ನಾಟಕಕ್ಕೆ ಆಯ್ಕೆಯಾದರು.
ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದೆ:
ಮನ್ಸೂರ್ ಅಲಿ ಖಾನ್ ಈಗಲಾದರೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೊನೆಯ ಸ್ಥಾನದಿಂದ ಭಡ್ತಿ ಪಡೆದಿದ್ದಾರೋ ಎಂದು! ಇಲ್ಲ. ಮತ್ತದೇ ನಂಬರ್ ೧೧ ಸ್ಥಾನದಲ್ಲಿ ಜೇನುಗೂಡಿನಂತಹ ಗಡ್ಡ ಬಿಟ್ಟು ತನ್ನದೇ ಯುನೀಕ್ ಸ್ಟೈಲ್-ನಲ್ಲಿ ಬ್ಯಾಟಿಂಗ್ ಮಾಡಲು ಆಗಮಿಸಿದರು.
ತುಂಬಾನೇ ಇಷ್ಟವಾದದ್ದು:
ನಮ್ಮ ಮನಸಲ್ಲೂ ಕ್ರಿಕೆಟ್ ನಮ್ಮ ಕನಸಲ್ಲೂ ನಮ್ಮ ಕೆಪಿಎಲ್ ಕೆಪಿಎಲ್
ನಮ್ಮ ಉತ್ಸಾಹಕ್ಕೆಂದು ನಮ್ಮ ಉಲ್ಲಾಸ ನಮ್ಮ ಕೆಪಿಎಲ್ ನಮ್ಮ ಕೆಪಿಎಲ್
ಆ ಚಲಿಸುತಾ ಆಡುವಾ ಕರುನಾಡೆಲ್ಲಾ ಈ ಉತ್ಸವ
ಕೂಡಿ ಆಡಿ ಜಗವಾ
ಗೆಲ್ಲೋಣ....(ಕೆಪಿಎಲ್)
ಗೆಲ್ಲೋಣ.....(ಕೆಪಿಎಲ್)
ಕೆಪಿಎಲ್ ಕ್ಷಣ:
ಫೈನಲ್ ಪಂದ್ಯ. ಮೊದಲ ಆರು ಓವರ್-ಗಳ ಒಳಗೆ ಸ್ಪಿನ್ನರ್ ಆನಂದ್ ಕಟ್ಟಿ ಆರಂಭಿಕ ಆಟಗಾರ ಮನಿಷ್ ಪಾಂಡೆಗೆ ಬೌಲಿಂಗ್ ಮಾಡುತ್ತಿದ್ದಾರೆ. ೩೭ ರ ಹರೆಯದ ಹಿರಿಯ ಅನುಭವಿ ಆಟಗಾರನಿಂದ ೨೦ರ ಹರೆಯದ ಯುವ ಪ್ರತಿಭಾವಂತ ಆಟಗಾರನಿಗೆ ಬೌಲಿಂಗ್. ಹಿರಿಯನಿಗೆ ತಾನೇನೂ ಕಮ್ಮಿಯಿಲ್ಲ ಎಂದು ತೋರಿಸಿವ ಛಲ. ಕಿರಿಯನಿಗೆ ತನ್ನ ಐಪಿಎಲ್ ಮತ್ತು ಕೆಪಿಎಲ್ ಚಮತ್ಕಾರಗಳನ್ನು ಮುಂದುವರೆಸಿ ಹಿರಿಯನ ಬೌಲಿಂಗನ್ನು ಚಿಂದಿಗೊಳಿಸುವ ತವಕ. ಕಟ್ಟಿ ಎಸೆದ ಚೆಂಡು ಗಾಳಿಯಲ್ಲಿ ತೇಲಿಬಂದಂತೆ ಅನಿಸಿ ಮನಿಷ್ ಎಡಗಾಲನ್ನು ಮುಂದಿಟ್ಟು ಡ್ರೈವ್ ಮಾಡಲು ಕಮಿಟ್ ಆಗಿಬಿಟ್ಟರು. ಡ್ರೈವ್ ಶಾಟ್ ಆಡಬೇಕಾದರೆ ಚೆಂಡು ಪುಟಿದೇಳುವೆಡೆ ಎಡಗಾಲು ಮತ್ತು ಬ್ಯಾಟ್ ಇರಬೇಕು. ಇಲ್ಲಿ ಮನೀಷ್ ಎಡಗಾಲು ಮತ್ತು ಬ್ಯಾಟ್ ಎರಡೂ ಇದ್ದವು ಆದರೆ ಚೆಂಡೇ ಇರಲಿಲ್ಲ! ಮನೀಷ್ ಒಬ್ಬ ಫ್ರಂಟ್ ಫೂಟ್ ಆಟಗಾರ ಎಂಬ ಅರಿವು ಇದ್ದ ಆನಂದ್ ಕಟ್ಟಿ, ಚೆಂಡನ್ನು ಸ್ವಲ್ಪ ಮಾತ್ರ ಗಾಳಿಯಲ್ಲಿ ತೇಲಿಬಿಟ್ಟಿದ್ದರು ಮತ್ತು ಚೆಂಡಿನ ರಿಲೀಸ್ ಕೂಡಾ ಕ್ಷಣಮಾತ್ರ ತಡವಾಗಿ ಮಾಡಿದ್ದರು. ಹಾಗಾಗಿ ಚೆಂಡಿನ ಲೆಂತ್ ಅರಿಯುವಲ್ಲಿ ಮನೀಷ್ ಸಂಪೂರ್ಣ ವಿಫಲರಾದರು. ಸಂಪೂರ್ಣವಾಗಿ ಫ್ಲೈಟ್ ಮಾಡಲಾಗಿದೆ ಎಂದು ಡ್ರೈವ್ ಮಾಡಲು ಮುಂದೆ ಬಂದರೆ ಅಲ್ಲಿ ಚೆಂಡೇ ಇಲ್ಲ. ಶಾಟ್ ಆಡಲು ಕಮಿಟ್ ಆದ ಮನಿಷ್, ಡ್ರೈವ್ ಮಾಡಲು ಆಗದೆ ಬ್ಯಾಟನ್ನು ಹಾಗೆ ಮುಂದೆ ಬೀಸಿದರು. ಒಂದೆರಡು ಅಡಿ ಮೊದಲೇ ಪುಟಿದೆದ್ದ ಚೆಂಡು ತಡವಾಗಿ ಆಗಮಿಸಿ ಗಾಳಿಯಲ್ಲಿ ಹ್ಯಾಂಗ್ ಆಗಿದ್ದ ಬ್ಯಾಟಿನ ಅಂಚಿಗೆ ಬಡಿದು ಮಿಡ್ ವಿಕೆಟ್ ನಲ್ಲಿ ಸುಲಭದ ಕ್ಯಾಚ್. ಈ ವಿಕೆಟನ್ನು ಕಟ್ಟಿ ತುಂಬಾ ಸೆಲೆಬ್ರೇಟ್ ಮಾಡಿ ಎಂಜಾಯ್ ಮಾಡಿದರು. ಯಾಕೆಂದರೆ ಈ ವಿಕೆಟನ್ನು ಅವರು ಗಳಿಸಿದ್ದರು. ತಲೆ ತಗ್ಗಿಸಿ ಅಲ್ಲಿಂದ ಡಗ್ ಔಟ್ ಕಡೆ ನಡೆದರು ಮನೀಷ್. ಮನೀಷ್ ಬಕ್ರಾ ಆದ ಪರಿ ನೋಡಿ ಬಿದ್ದು ಬಿದ್ದು ನಕ್ಕು ಆ ಕ್ಷಣವನ್ನು ಬಹಳ ಎಂಜಾಯ್ ಮಾಡಿದೆ.
Labels: ಕ್ರಿಕೆಟ್
Sunday, September 13, 2009
ಲಕ್ಷ್ಮೇಶ್ವರದ ದೇವಾಲಯಗಳು

೨೦-೦೧-೨೦೦೯.
ಒಂದು ದೇವಸ್ಥಾನ ಮತ್ತು ೨ ಬಸದಿಗಳನ್ನು ನೋಡಿ ಬರೋಣವೆಂದು ಲಕ್ಷ್ಮೇಶ್ವರಕ್ಕೆ ತೆರಳಿದರೆ ಅಲ್ಲಿ ಇನ್ನೂ ೩ ದೇವಾಲಯಗಳು ಮತ್ತು ಒಂದು ಆಕರ್ಷಕ ಮಸೀದಿಯಿರುವ ಬಗ್ಗೆ ತಿಳಿಯಿತು. ಒಂದು ಕಡೆಯಿಂದ ಮತ್ತೊಂದೆಡೆ ನಡೆದೇ ತೆರಳಬೇಕಾಗಿತ್ತು. ಆ ಉರಿ ಬಿಸಿಲಿನಲ್ಲಿ ಸುಮಾರು ಒಂದು ತಾಸು ಅಲ್ಲಿ ಇಲ್ಲಿ ನಡೆದು ಹೋಗಬೇಕಾದರೆ ಸಾಕು ಸಾಕಾಯಿತು. ಸೋಮೇಶ್ವರ ದೇವಾಲಯ, ಲಕ್ಷ್ಮಣೇಶ್ವರ ದೇವಾಲಯ, ಮಹಾಂತಯ್ಯನ ಗುಡಿ, ಅನಂತನಾಥ ಬಸದಿ ಮತ್ತು ಶಾಂತಿನಾಥ ಬಸದಿಗಳನ್ನು ನೋಡುವಷ್ಟರಲ್ಲಿಯೇ ಸಮಯ ಕಳೆದುಹೋಯಿತು. ಬಾಳೇಶ್ವರ ದೇವಾಲಯ, ಗೊಲ್ಲಾಳೇಶ್ವರ ದೇವಾಲಯ ಮತ್ತು ಇಸವಿ ೧೬೧೭ರಲ್ಲಿ ನಿರ್ಮಾಣಗೊಂಡಿರುವ ಜುಮ್ಮಾ ಮಸೀದಿಗಳನ್ನು ನೋಡಲು ಆಗಲಿಲ್ಲ.

ಹಿಂದೆ ’ಪುಲಿಗೆರೆ’ ಎಂದು ಕರೆಯಲಾಗುತ್ತಿದ್ದ ಊರು ಇಂದು ಲಕ್ಷ್ಮೇಶ್ವರ ಎಂದು ಬದಲಾಗಿದೆ. ಚಾಲುಕ್ಯ ಆಡಳಿತ ಕಾಲದಲ್ಲಿ ಲಕ್ಷ್ಮೇಶ್ವರ ಪ್ರಖ್ಯಾತ ಜೈನ ಧಾರ್ಮಿಕ ಕೇಂದ್ರವಾಗಿತ್ತು. ಆದಿಕವಿ ಪಂಪ ಪುಲಿಗೆರೆಯಲ್ಲಿ ಕಾವ್ಯರಚನೆ ಮಾಡಿದ್ದನೆಂದು ಶಾಸನಗಳಿಂದ ಮತ್ತು ಆತನ ಕಾವ್ಯಗಳಿಂದಲೇ ತಿಳಿದುಬರುತ್ತವೆ. ಚಾಲುಕ್ಯರಲ್ಲದೇ ಈ ನಾಡನ್ನು ರಾಷ್ಟ್ರಕೂಟರು ಮತ್ತು ಕದಂಬರು ಕೂಡಾ ಆಳಿದ್ದಾರೆ.

ಲಕ್ಷ್ಮೇಶ್ವರದಲ್ಲಿ ಪ್ರಸಿದ್ಧಿ ಪಡೆದಿರುವ ದೇವಾಲಯವೆಂದರೆ ಸೋಮೇಶ್ವರ ದೇವಾಲಯ. ಈ ದೇವಾಲಯವನ್ನು ೧೧ನೇ ಶತಮಾನದ ಕೊನೆಯಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸೋಮೇಶ್ವರನನ್ನು ಕವಿಗಳಾದ ಹರಿಹರ ಮತ್ತು ರಾಘವಾಂಕ ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಸೂರ್ಯನ ಪ್ರಥಮ ಕಿರಣ ಗರ್ಭಗುಡಿಯಲ್ಲಿರುವ ಸೋಮೇಶ್ವರನ ಮೇಲೆ ಬೀಳುವಂತೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ಥಳೀಯ ಜೈನರ ಪ್ರಕಾರ ಇದು ಮೊದಲು ಜೈನ ಬಸದಿಯಾಗಿದ್ದು ನಂತರ ಹಿಂದೂ ದೇವಾಲಯವನ್ನಾಗಿ ಪರಿವರ್ತಿಸಲಾಗಿದೆ. ಆದರೆ ದೇವಾಲಯದ ರಚನೆಯನ್ನು ಮತ್ತು ಶಿಲ್ಪಕಲೆಯ ವೈಭವತೆಯನ್ನು ಗಮನಿಸಿದರೆ ಈ ಮಾತನ್ನು ನಂಬುವುದು ಬಹಳ ಕಷ್ಟ.

೩೨ ಕಂಬಗಳುಳ್ಳ ಮುಖಮಂಟಪ, ೪ ಕಂಬಗಳುಳ್ಳ ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿರುವ ಸೋಮೇಶ್ವರ ದೇವಾಲಯ ಏಕಕೂಟವಾಗಿದ್ದು ವಿಶಾಲವಾಗಿದೆ. ಅಂತರಾಳ ಮತ್ತು ಗರ್ಭಗುಡಿಗಳಲ್ಲಿ ನೆಲಕ್ಕೆ ಮಾರ್ಬಲ್ ಹಾಸುವ ಮೂಲಕ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ಗರ್ಭಗುಡಿಯಲ್ಲಿ ಶಿವ ಮತ್ತು ಪಾರ್ವತಿಯರು ನಂದಿಯನ್ನೇರಿ ಕುಳಿತಿರುವ ಸುಂದರ ಕರಿಕಲ್ಲಿನ ಮೂರ್ತಿಯಿರುವುದು ಇಲ್ಲಿನ ವೈಶಿಷ್ಟ್ಯ. ಮುಂದಿನಿಂದ ನೋಡಿದರೆ ಪಾರ್ವತಿ ಶಿವನ ಹಿಂದೆ ಕುಳಿತಿರುವುದು ಕಾಣಬರುವುದಿಲ್ಲ. ಆಕೆ ಕಾಣಲೆಂದು ಮೂರ್ತಿಯ ಹಿಂದೆ ಕನ್ನಡಿಯೊಂದನ್ನು ಇರಿಸಲಾಗಿದೆ. ಈ ಮೂರ್ತಿ ಬಹಳ ಸುಂದರವಾಗಿದೆ. ಎಲ್ಲಾ ಶಿವ ದೇವಾಲಯಗಳಲ್ಲಿ ಶಿವಲಿಂಗ ಮತ್ತು ಅದಕ್ಕೆ ಮುಖ ಮಾಡಿ ನಂದಿಯಿದ್ದರೆ, ಇಲ್ಲಿ ಮಾತ್ರ ನಂದಿಯನ್ನೇರಿ ಲೋಕಸಂಚಾರಕ್ಕೆ ಹೊರಟಿರುವ ಭಂಗಿಯಲ್ಲಿ ಶಿವ ಮತ್ತು ಪಾರ್ವತಿ!


ದೇವಾಲಯದ ಮುಖಮಂಟಪ ವಿಶಾಲವಾಗಿದ್ದು ೩ ಪ್ರವೇಶ ದ್ವಾರಗಳನ್ನು ಹೊಂದಿದೆ. ಹಿಂದಿನ ಕಾಲದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸೋಮೇಶ್ವರನಿಗಾಗಿ ನಾಟ್ಯಸೇವೆಗಳು ಇದೇ ಮುಖಮಂಟಪದಲ್ಲಿ(ಸಭಾಮಂಟಪ) ನಡೆಯುತ್ತಿದ್ದವು. ನವರಂಗಕ್ಕೂ ೩ ದ್ವಾರಗಳಿವೆ. ಇಕ್ಕೆಲಗಳಲ್ಲಿರುವ ಎರಡು ದ್ವಾರಗಳು ತಲಾ ೪ ಕಂಬಗಳುಳ್ಳ ಸುಂದರ ಕೆತ್ತನೆಗಳನ್ನೊಳಗೊಂಡಿರುವ ಮುಖಮಂಟಪಗಳನ್ನು ಹೊಂದಿವೆ.



ದೇವಾಲಯದ ಗರ್ಭಗುಡಿಯ ಮತ್ತು ಗೋಪುರದ ಹೊರಭಾಗದಲ್ಲಿರುವ ಚಾಲುಕ್ಯ ಶಿಲ್ಪಗಳು ಉತ್ತಮವಾಗಿವೆ. ಅಲ್ಲಲ್ಲಿ ಸಣ್ಣ ತೇಪೆ ಸಾರಿಸಿ ಪುರಾತತ್ವ ಇಲಾಖೆ ಮೂಲ ರೂಪ ಕಾದುಕೊಳ್ಳುವ ಪ್ರಯತ್ನ ಮಾಡಿದೆ.



ದೇವಾಲಯದ ಹಿಂಭಾಗದಲ್ಲಿ ಅದ್ಭುತವಾದ ಪುಷ್ಕರಿಣಿಯೊಂದಿದೆ. ಆಯತಾಕಾರದ ವಿಶಿಷ್ಟ ಮಾದರಿಯ ಪುಷ್ಕರಿಣಿಯಿದು. ಎರಡು ವರ್ಷದ ಹಿಂದಿನವರೆಗೂ ಈ ಪುಷ್ಕರಿಣಿ ಕಸಕಡ್ಡಿಗಳಿಂದ ತುಂಬಿಹೋಗಿ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಇಲ್ಲೊಂದು ಪುಷ್ಕರಿಣಿಯಿದೆ ಎಂದರೆ ನಂಬಲೂ ಅಸಾಧ್ಯವಾದ ಮಟ್ಟಿಗೆ ಸ್ಥಳೀಯರು ಇದನ್ನೊಂದು ಕಸದ ತೊಟ್ಟಿಯನ್ನಾಗಿ ಪರಿವರ್ತಿಸಿಕೊಂಡಿದ್ದರು. ಈಗ ಪುರಾತತ್ವ ಇಲಾಖೆ ಬಹಳಷ್ಟು ಶ್ರಮವಹಿಸಿ ಹಂತಹಂತವಾಗಿ ಪುಷ್ಕರಿಣಿಯನ್ನು ಸ್ವಚ್ಛಗೊಳಿಸಿ ಮೂಲರೂಪಕ್ಕೆ ತಂದಿದೆ. ಈಗ ಪುಷ್ಕರಿಣಿ ಸ್ವಚ್ಛ ನೀರಿನಿಂದ ನಳನಳಿಸುತ್ತಿದೆ.


ಸೋಮೇಶ್ವರ ದೇವಾಲಯದ ನಂತರ ಅನಂತನಾಥ ಬಸದಿ. ಇದಕ್ಕೆ ಯಾವಾಗಲೂ ಬೀಗ ಜಡಿದಿರುತ್ತದೆ. ಅಲ್ಲೇ ಬದಿಯಲ್ಲಿ ಸಂದಿಗೊಂದಿಗಳಲ್ಲಿ ಸ್ವಲ್ಪ ದೂರ ನಡೆದು ಮನೆಯೊಂದರಿಂದ ಬೀಗ ಕೇಳಿ ಪಡಕೊಂಡು ನಾವಾಗಿಯೇ ಪ್ರಾಂಗಣದ ಮತ್ತು ಬಸದಿಯ ಬೀಗಗಳನ್ನು ತೆಗೆದು ವೀಕ್ಷಿಸಬೇಕು. ಇದೊಂದು ತ್ರಿಕೂಟ ಶೈಲಿಯ ಬಸದಿ.


ನಂತರದ ಸರದಿ ಶಾಂತಿನಾಥ ಬಸದಿಯದ್ದು. ಈ ತೀರ್ಥಂಕರರ ಲಾಂಛನ ಶಂಖವಾಗಿರುವುದರಿಂದ ಈ ಬಸದಿಯನ್ನು ಶಂಖ ಬಸದಿಯೆಂದೂ ಕರೆಯಲಾಗುತ್ತದೆ. ಇದು ಬಹಳ ಪುರಾತನ ಬಸದಿಯೆಂದು ಇತಿಹಾಸಕಾರರ ಅಭಿಪ್ರಾಯ. ಸುಮಾರು ೬ ಅಡಿ ಎತ್ತರದ ಅಧಿಷ್ಠಾನದ ಮೇಲೆ ಈ ಬಸದಿಯನ್ನು ನಿರ್ಮಿಸಲಾಗಿದೆ. ೧೬ ಕಂಬಗಳುಳ್ಳ ಚೌಕಾಕಾರದ ಮುಖಮಂಟಪ, ನವರಂಗ ಮತ್ತು ಗರ್ಭಗುಡಿಗಳನ್ನು ಈ ಬಸದಿ ಹೊಂದಿದೆ. ಈ ಬಸದಿಯಲ್ಲಿ ೩ ವಿಶೇಷಗಳಿವೆ.


ಒಂದನೇಯದು ಇಲ್ಲಿರುವ ಬಹಳ ಅಪರೂಪದ ’ಸಹಸ್ರಕೂಟ ಜಿನಬಿಂಬ’ ಮೂರ್ತಿ. ಸುಮಾರು ೫-೬ ಅಡಿ ಎತ್ತರವಿರುವ ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವ ಈ ಮೂರ್ತಿ ಅಪ್ರತಿಮವಾಗಿದೆ. ಸಾವಿರ ತೀರ್ಥಂಕರರನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವುದರಿಂದ ಹಾಗೆ ಹೆಸರು. ಇದೊಂದು ಬಹಳ ಅಪರೂಪದ ಮೂರ್ತಿ. ಭಾರತದಲ್ಲಿ ಬೇರೆಲ್ಲೂ ಈ ತರಹದ ಮೂರ್ತಿ ಇಲ್ಲ. ಊರಿನ ಹೊಲವೊಂದರಲ್ಲಿ ದೊರಕಿದ ಈ ಮೂರ್ತಿಯನ್ನು ಬಸದಿಯ ಮುಖಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಶಾಂತಿನಾಥ ಬಸದಿಯಲ್ಲಿರುವ ಎರಡನೇ ವಿಶೇಷವೆಂದರೆ ೫ ತೀರ್ಥಂಕರರಿರುವ ’ಪಂಚ ಪರಮೇಷ್ಠಿ’ ಮೂರ್ತಿ. ಕರಿಕಲ್ಲಿನಲ್ಲಿ ಕೆತ್ತಲಾಗಿರುವ ಈ ಮೂರ್ತಿಯಲ್ಲಿ ಇಬ್ಬರು ತೀರ್ಥಂಕರರನ್ನು ಕುಳಿತುಕೊಂಡಿರುವಂತೆ ಮತ್ತು ೩ ತೀರ್ಥಂಕರರನ್ನು ನಿಂತಿರುವ ಶೈಲಿಯಲ್ಲಿ ಸುಂದರವಾಗಿ ಕೆತ್ತಲಾಗಿದೆ.


ಮೂರನೇ ವಿಶೇಷವೆಂದರೆ ಮುಖಮಂಟಪದ ಹೊರಗೋಡೆಗಳಲ್ಲಿರುವ ಮಿಥುನ ಶಿಲ್ಪಗಳು. ಬಸದಿಗಳಲ್ಲಿ ಮಿಥುನ ಶಿಲ್ಪಗಳಿರುವುದು ವಿರಳ. ಬಸದಿಯ ಎದುರಿಗೆ ದೀಪಸ್ತಂಭವಿದೆ. ಈ ಶಂಖ ಬಸದಿಯಲ್ಲೇ ಕುಳಿತು ಪಂಪ ತನ್ನ ಪ್ರಸಿದ್ಧ ಕಾವ್ಯ ’ಆದಿ ಪುರಾಣ’ವನ್ನು ರಚಿಸಿದನೆಂದು ಹೇಳಲಾಗುತ್ತದೆ.

ಸ್ಥಳೀಯ ಜೈನ ಸಮುದಾಯದವರೇ ಈ ಎರಡೂ ಬಸದಿಗಳ ರಕ್ಷಣೆಯನ್ನು ಕೈಗೆತ್ತಿಕೊಂಡಿದ್ದಾರೆ. ಒಂದು ಸಮುದಾಯ ಅನಂತನಾಥ ಬಸದಿಯನ್ನು ನೋಡಿಕೊಂಡರೆ ಇನ್ನೊಂದು ಸಮುದಾಯ ಶಾಂತಿನಾಥ ಬಸದಿಯನ್ನು ನೋಡಿಕೊಳ್ಳುತ್ತದೆ. ಈಗಲೂ ಸುತ್ತಮುತ್ತಲಿನ ಹೊಲಗಳಲ್ಲಿ ಭಗ್ನಗೊಂಡಿರುವ ಮೂರ್ತಿಗಳು ಸಿಗುತ್ತಿರುತ್ತವೆ. ಅಂತಹ ವಿಗ್ರಹಗಳನ್ನು ’ಫೋಟೋ ತೆಗೆಯಬಾರದು’ ಎಂಬ ಷರತ್ತಿನೊಂದಿಗೆ ಬಸದಿ ನೋಡಿಕೊಳ್ಳುವ ಯುವಕ ನನಗೆ ತೋರಿಸಿದ. ಬಸದಿಯ ಹಿಂದೆಯೇ ೨೪ ತೀರ್ಥಂಕರರ ಪೀಠವೊಂದು ದೊರಕಿದೆ. ಪೀಠದ ಮೇಲಿನ ತೀರ್ಥಂಕರರ ಮೂರ್ತಿಗಳು ನಾಪತ್ತೆ.

ಶಾಂತಿನಾಥ ಬಸದಿಯನ್ನು ನೋಡಿಕೊಳ್ಳುವ ಯುವಕನ ಹೆಸರು ನೇಮಿನಾಥ! ಈ ನೇಮಿನಾಥ ನನಗೆ ಲಕ್ಷ್ಮೇಶ್ವರದಲ್ಲಿರುವ ಇನ್ನುಳಿದ ದೇವಾಲಯಗಳ ಬಗ್ಗೆ ಅತ್ಯುತ್ಸಾಹದಿಂದ ಮಾಹಿತಿ ನೀಡತೊಡಗಿದ. ಸೋಮೇಶ್ವರ ದೇವಾಲಯ ಮತ್ತು ೨ ಬಸದಿಗಳನ್ನು ನೋಡುವ ಇರಾದೆ ಇದ್ದ ನನಗೆ ಈಗ ಲಕ್ಷ್ಮೇಶ್ವರದಲ್ಲೇ ನೋಡಲು ಇನ್ನಷ್ಟು ಸ್ಥಳಗಳಿವೆ ಎಂಬ ಮಾಹಿತಿ ದೊರಕಿತು. ಅದಾಗಲೇ ನಡೆದು ನಡೆದು ಸುಸ್ತಾಗಿದ್ದೆ. ಆದರೂ ಇನ್ನೆರಡು ದೇವಾಲಯಗಳನ್ನಾದರೂ ನೋಡೋಣವೆಂದು ಲಕ್ಷ್ಮಣೇಶ್ವರ ದೇವಾಲಯದೆಡೆ ಹೆಜ್ಜೆ ಹಾಕಿದೆ. ನೇಮಿನಾಥ ನನ್ನೊಡನೆ ಮಾರ್ಗದರ್ಶಿಯಾಗಿ ಬರಲು ಒಪ್ಪಿಕೊಂಡ. ಊರಿನಲ್ಲೊಂದು ೪೦೦ ವರ್ಷ ಹಳೇಯ ಮಸೀದಿಯಿರುವುದಾಗಿಯೂ ಅಲ್ಲಿನ ವಿಶೇಷವೆಂದರೆ ಕಲ್ಲಿನ ಸರಪಳಿಗಳು ಎಂದು ನೇಮಿನಾಥ ವಿವರಿಸತೊಡಗಿದ.



ಹಳೇ ಲಕ್ಷ್ಮೇಶ್ವರದಲ್ಲಿರುವುದು ಲಕ್ಷ್ಮಣೇಶ್ವರ ದೇವಾಲಯ. ಈ ದೇವಾಲಯವನ್ನು ’ಲಕ್ಷ್ಮಿಲಿಂಗನ ದೇವಾಲಯ’ವೆಂದೂ ಕರೆಯುತ್ತಾರೆ. ಈ ದೇವಾಲಯ ತ್ರಿಕೂಟಾಚಲ ಶೈಲಿಯಲ್ಲಿದ್ದು ಉತ್ತಮ ಶಿಲ್ಪಕಲೆಯನ್ನು ಹೊಂದಿದೆ. ಹೆಚ್ಚಿನೆಡೆ ಕೆತ್ತನೆಗಳು ನಶಿಸಿಹೋಗಿದ್ದು, ಪುರಾತತ್ವ ಇಲಾಖೆ ಅಲ್ಲಲ್ಲಿ ಸಿಕ್ಕಿರುವ ಕೆತ್ತನೆಗಳ ತುಂಡುಗಳನ್ನು ದೇವಾಲಯದ ಹೊರಗೋಡೆಗೆ ಅಂಟಿಸಿದೆ. ಈ ದೇವಾಲಯದ ಮುಖಮಂಟಪ ವಿಶಾಲವಾಗಿದ್ದು ೩ ದ್ವಾರಗಳನ್ನು ಮತ್ತು ೫೨ ಕಂಬಗಳನ್ನು ಹೊಂದಿದೆ. ಎಲ್ಲಾ ೩ ಗರ್ಭಗುಡಿಗಳಿಗೆ ಪ್ರತ್ಯೇಕ ಅಂತರಾಳ ಮತ್ತು ಸಾಮಾನ್ಯ ನವರಂಗ. ಗೋಪುರಗಳೆಲ್ಲಾ ಬಿದ್ದುಹೋಗಿವೆ. ಗರ್ಭಗುಡಿಯಲ್ಲಿ ಪೀಠದ ಮೇಲೆ ಶಿವಲಿಂಗವಿದೆ ಮತ್ತು ನಂದಿಯ ಮೂರ್ತಿ ಎಲ್ಲೂ ಇರಲಿಲ್ಲ.

ಅಲ್ಲಿಂದ ಮುಂದೆ ಸಿಗುವುದು ಮಹಾಂತಯ್ಯನ ತೋಟದಲ್ಲಿರುವ ದೇವಾಲಯ. ಈ ದೇವಾಲಯದ ಹೆಸರೇ ’ಮಹಾಂತಯ್ಯನ ಗುಡಿ’. ಅಷ್ಟೇನು ವಿಶೇಷವಿಲ್ಲದಿರುವ ಸಣ್ಣ ದೇವಾಲಯವಿದು. ಗರ್ಭಗುಡಿಯಲ್ಲಿ ನಂದಿಯ ಮೂರ್ತಿಯಿದೆ. ಬಾಳೇಶ್ವರ ಮತ್ತು ಗೊಲ್ಲಾಳೇಶ್ವರ ದೇವಾಲಯಗಳ ಬಗ್ಗೆ ನೇಮಿನಾಥ ಮಾಹಿತಿ ನೀಡಿದರೂ ಅಲ್ಲಿಗೆ ಮತ್ತು ಜುಮ್ಮಾ ಮಸೀದಿಗೆ ತೆರಳುವಷ್ಟು ಸಮಯ ನನ್ನಲ್ಲಿರಲಿಲ್ಲ. ಲಕ್ಷ್ಮೇಶ್ವರಕ್ಕೆ ಈ ಭೇಟಿ ಅಪೂರ್ಣವಾಗಿಯೇ ಉಳಿಯಿತು.
Friday, September 11, 2009
Wednesday, September 09, 2009
Friday, September 04, 2009
ಭೀಮೇಶ್ವರ ದೇವಾಲಯ - ನೀಲಗುಂದ

೦೯-೦೩-೨೦೦೮.
ನೀಲಗುಂದ ತಲುಪಿ ಭೀಮೇಶ್ವರ ದೇವಾಲಯದ ದಾರಿಯಲ್ಲಿ ತೆರಳುತ್ತಿರುವಾಗ ಧೂಳು ತುಂಬಿದ ಮಣ್ಣಿನ ದಾರಿ ಊರಿನಿಂದ ಹೊರಗೆಲ್ಲೋ ತೆರಳುತ್ತಿತ್ತು. ಆದರೆ ಮುಂದೆ ಕಾಣಸಿಗಲಿರುವ ಅದ್ಭುತ ದೃಶ್ಯದ ಎಳ್ಳಷ್ಟು ಕಲ್ಪನೆಯೂ ನಮಗಿರಲಿಲ್ಲ. ಬೆಟ್ಟದ ಬದಿಯಲ್ಲೇ ರಸ್ತೆ ಇತ್ತು. ಸಣ್ಣ ದಿಬ್ಬವೊಂದನ್ನೇರಿದ ಕೂಡಲೇ ಕೆರೆಯ ತಟದಲ್ಲಿ ಅನತಿ ದೂರದಲ್ಲಿ ರಾರಾಜಿಸುತ್ತಿದ್ದ ಭೀಮೇಶ್ವರ ದೇವಾಲಯದ ಬಲೂ ಸುಂದರ ದೃಶ್ಯ.


ಅಮೃತ ಕೆರೆ ಎಂದು ಈ ಕೆರೆಯನ್ನು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗಷ್ಟೆ ಪುರಾತತ್ವ ಇಲಾಖೆ ಭೀಮೇಶ್ವರ ದೇವಾಲಯವನ್ನು ತನ್ನ ಸುಪರ್ದಿಗೆ ಪಡೆದಿದ್ದು ಸುತ್ತಲೂ ಚಪ್ಪಡಿ ಕಲ್ಲು ಹಾಸುವ ಕಾರ್ಯ ನಡೆಯುತ್ತಿದೆ. ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿಗೆ ಸಾಕಷ್ಟು ಜನರು ಆಗಮಿಸುತ್ತಾರೆ.


ಕೆರೆಯೊಳಗೆ ಚಾಚಿರುವ ಸಣ್ಣ ದಿಬ್ಬದ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಕಲ್ಯಾಣಿ ಚಾಲುಕ್ಯರಿಂದ ನಿರ್ಮಿತಗೊಂಡು ಹೊಯ್ಸಳರಿಂದ ಅಭಿವೃದ್ಧಿಗೊಂಡ ದೇವಾಲಯ ಎನ್ನಲಾಗುತ್ತಿದೆ. ಈ ತ್ರಿಕೂಟಾಚಲ ದೇವಾಲಯದ ಪ್ರಮುಖ ಗರ್ಭಗುಡಿಯ ಮೇಲೆ ಮಾತ್ರ ಗೋಪುರವಿದ್ದು, ಸುಂದರ ಕೆತ್ತನೆಯಿರುವ ಈ ಗೋಪುರದ ರಚನೆ ಪಕ್ಕಾ ಹೊಯ್ಸಳ ಶೈಲಿಯಲ್ಲಿದೆ. ದೇವಾಲಯ ಕೆರೆಗೆ ಮುಖ ಮಾಡಿ ಇದೆ ಮತ್ತು ಕೆರೆಗೆ ಇಳಿಯಲು ನಾಲ್ಕಾರು ಮೆಟ್ಟಿಲುಗಳಿವೆ.


ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖಮಂಟಪಗಳನ್ನು ಹೊಂದಿರುವ ದೇವಾಲಯಕ್ಕೆ ಪ್ರವೇಶ ಮುಖಮಂಟಪದ ಎರಡೂ ಪಾರ್ಶ್ವಗಳಿಂದ ಇದೆ. ಮುಖಮಂಟಪಕ್ಕೆ ತಾಗಿಕೊಂಡೇ ಖಾಲಿ ಗರ್ಭಗುಡಿಯೊಂದಿದೆ. ಕೆಲವೊಂದು ದೇವಾಲಯಗಳಲ್ಲಿ ಈ ರೀತಿ ನಿರ್ಮಾಣವಿರುತ್ತದೆ. ಮುಖಮಂಟಪದಲ್ಲೇ ಗರ್ಭಗುಡಿಯೊಂದಿರುತ್ತದೆ ಮತ್ತು ಈ ಗರ್ಭಗುಡಿ ಸೂರ್ಯನಾರಾಯಣ ದೇವರದ್ದಾಗಿದ್ದು ಪ್ರಮುಖ ಗರ್ಭಗುಡಿಗೆ ಮುಖ ಮಾಡಿ ಇರುತ್ತದೆ.

ನಂದಿ ಮೂರ್ತಿ ನವರಂಗದಲ್ಲಿದೆ ಮತ್ತು ಅದು ಮೂಲ ನಂದಿಯ ವಿಗ್ರಹದಂತೇ ಕಾಣದೇ, ಎಲ್ಲಿಂದಲೋ ತಂದು ಇರಿಸಲಾಗಿರುವಂತೆ ತೋರುತ್ತಿತ್ತು. ನವರಂಗದ ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳ ರಚನೆ ಸುಂದರವಾಗಿದೆ. ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಸುಂದರ ಶಿವಲಿಂಗವಿದೆ. ಅಂತರಾಳದ ದ್ವಾರ ೫ ತೋಳಿನದಾಗಿದ್ದು ಅಭೂತಪೂರ್ವ ಕೆತ್ತನೆಯನ್ನು ಹೊಂದಿದ್ದು ಬಹಳ ವಿಶಿಷ್ಟವಾಗಿದೆ. ದ್ವಾರದ ಇಕ್ಕೆಲಗಳಲ್ಲಿ ಸುಂದರ ಕೆತ್ತನೆಯಿರುವ ಜಾಲಂಧ್ರಗಳು, ನಂತರ ಇನ್ನೂ ಸುಂದರ ಕೆತ್ತನೆಯಿರುವ ಕಲ್ಲಿನ ಕಂಬಗಳು. ಕೆಳಗೆ ದ್ವಾರಪಾಲಕರಂತೆ ದೇವ ದೇವಿಯರ ಕೆತ್ತನೆ.

ಇಷ್ಟೇ ಅಲ್ಲದೆ ಅಂತರಾಳದ ದ್ವಾರದ ಮೇಲೆಯೂ ಅದ್ಭುತ ಕೆತ್ತನೆ ಕೆಲಸವಿತ್ತು. ಈ ಕೆತ್ತನೆಗಳು ಯಾವುದೋ ಮಹತ್ವದ ಪೌರಾಣಿಕ ಘಟನೆಯನ್ನು ಬಿಂಬಿಸುತ್ತಿರಬೇಕು...ಆದರೆ ವಿವರಿಸಲು ಅಲ್ಲಿ ಯಾರೂ ಇರಲಿಲ್ಲ.


ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ಕವಾಟಗಳಿವೆ. ಒಂದರಲ್ಲಿ ಗಣೇಶನ ವಿಗ್ರಹವಿದ್ದರೆ ಮತ್ತೊಂದರಲ್ಲಿರುವ ವಿಗ್ರಹ ಯಾವುದೆಂದು ಗೊತ್ತಾಗಲಿಲ್ಲ. ನವರಂಗದಲ್ಲಿ ನಾಲ್ಕು ಸುಂದರ ಕಲ್ಲಿನ ಕಂಬಗಳಿವೆ. ಸಮೀಪದಲ್ಲೆಲ್ಲೋ ದೊರಕಿರುವ ಸುಂದರ ಮತ್ತು ವಿಶಿಷ್ಟ ವಿಗ್ರಹವೊಂದನ್ನು ಅಲ್ಲೇ ಇರಿಸಲಾಗಿದೆ. ಉಳಿದೆರದು ಗರ್ಭಗುಡಿಗಳೊಳಗೆ ಇಣುಕಿದರೆ ಖಾಲಿ ಖಾಲಿ.

ದೇವಾಲಯ ನಿರೀಕ್ಷಿಸಿದ್ದಕ್ಕಿಂತ ಎಷ್ಟೋ ಚೆನ್ನಾಗಿತ್ತು. ಆ ಪರಿಸರವನ್ನಂತೂ ಮರೆಯಲಸಾಧ್ಯ.
ಮಾಹಿತಿ: ಬಿ.ರಾಮಪ್ರಸಾದ ಗಾಂಧಿ
Tuesday, August 25, 2009
ಗಣೇಶ ಬಂದು ಹೋದ

ಕಳೆದ ೬ ವರ್ಷಗಳಲ್ಲಿ ಗಣೇಶ ಚತುರ್ಥಿಗೆ ಮನೆಗೆ ತೆರಳಲಾಗಿರಲಿಲ್ಲ. ಪ್ರತಿ ಸಲ ಏನಾದರೊಂದು ತೊಡಕುಗಳಿದ್ದವು (ಅಥವಾ ನನಗೇ ಮನಸ್ಸಿರಲಿಲ್ಲವೋ). ಆದರೆ ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇರುತ್ತದೆ ಎಂಬಂತೆ ಈ ಬಾರಿಯೂ ತೊಡಕುಗಳಿದ್ದರೂ ಹಳದೀಪುರದೆಡೆ ಪ್ರಯಾಣಿಸಿದೆ. ಯಾವಾಗಲೂ ನಮ್ಮ ಮನೆಯಲ್ಲಿ ಚೌತಿ ಎರಡು ದಿವಸ. ಆದರೆ ಪರಿವಾರದಲ್ಲಿ ಮರಣವೊಂದು ಸಂಭವಿಸಿದ್ದರಿಂದ ಈ ಬಾರಿ ಚೌತಿ ಒಂದೇ ದಿನ. ಇನ್ನು ಮುಂದೆ ಚೌತಿಗೆ ಮನೆಯಲ್ಲಿ ಹಾಜರಿರಲೇಬೇಕು. ಗಣೇಶನನ್ನು ಮನೆಗೆ ಸ್ವಾಗತಿಸಿ ನಂತರ ಬೀಳ್ಕೊಡುವವರೆಗಿನ ಕೆಲವು ಚಿತ್ರಗಳು ಇಲ್ಲಿವೆ.


























Labels: ಗಣೇಶ ಚತುರ್ಥಿ



